ಅಪವರ್ಗ
	
ಮುಕ್ತಿ, ಮೋಕ್ಷ, ಸಮಾಪ್ತಿ, ಕೊನೆ, ಬಿಡುಗಡೆ ಎನ್ನುವ ಅರ್ಥವುಳ್ಳ ಪಾರಿಭಾಷಿಕ ಪದ. ನ್ಯಾಯ ವೈಶೇಷಿಕ ದರ್ಶನಗಳಲ್ಲಿ ಈ ಮಾತನ್ನು ಮುಕ್ತಿಯೆನ್ನುವ ಅರ್ಥದಲ್ಲಿ ಬಳಸಿದ್ದಾರೆ. ಜೀವ ದುಃಖವನ್ನೆಲ್ಲ ಬಿಟ್ಟು ಅತ್ಯಂತಿಕ ನಿಃಶ್ರೇಯಸವನ್ನು ಕಂಡುಕೊಳ್ಳುವುದು ಅಪವರ್ಗ. ಶರೀರ, ಇಂದ್ರಿಯ, ಮನಸ್ಸು, ಬುದ್ಧಿ ಇವುಗಳೆಲ್ಲ ಅನಾತ್ಮಪದಾರ್ಥಗಳು; ಇದನ್ನೇ ಆತ್ಮವಸ್ತುವೆಂದು ಗ್ರಹಿಸುವುದು ದುಃಖಕ್ಕೆ ಕಾರಣ. ಶರೀರ ದುಃಖಕ್ಕೆ ಉಪಾದಾನ. ಜೀವನ ದುಃಖಮಯ, ದುಃಖ ಬೆರೆಯದೆ ಇರುವುದು ಪ್ರಾಪಂಚಿಕ ವ್ಯಾಪಾರದ ಲಕ್ಷಣವಲ್ಲ. ದೇಹಾತ್ಮ ಭ್ರಾಂತಿಯೆನ್ನುವುದು ಮಿಥ್ಯಾಜ್ಞಾನ. ಅದರಿಂದ ಉಂಟಾಗುವ ತೃಷ್ಣೆ ಪುನರ್ಜನ್ಮಕ್ಕೆ ಕಾರಣ. ವಿದ್ಯೆ, ಪ್ರತಿಭೆ, ಸತ್ಸಂಗ ಮತ್ತು ಯೋಗದಿಂದ ತತ್ತ್ವಜ್ಞಾನವನ್ನು ಪಡೆದುಕೊಂಡರೆ ಮಿಥ್ಯಾಜ್ಞಾನ ನಿವೃತ್ತಿಯಾಗಿ, ಪುನರ್ಜನ್ಮದ ಸಂಭವ ಇಲ್ಲವಾಗುವುದು. ಇದೇ ಅಮೃತತ್ವ. ಸಂಸಾರದಿಂದ ಹೊರಬಂದು ಉಳಿಯುವುದೇ ಮೋಕ್ಷ. ಇದೇ ಬ್ರಹ್ಮ ಎಂದು ವಾತ್ಸ್ಯಾಯನನ ವಾದ. ಆತ್ಮ ವಸ್ತುವಿಗೆ ದುಃಖ ಆತ್ಯಂತಿಕವಾಗಿ ನಾಶವಾಗಿ ಗುಣರಾಹಿತ್ಯ ಒದಗುವುದೇ ಅಪವರ್ಗವೆನಿಸಿಕೊಳ್ಳುವುದೆಂದು ವೈಶೇಷಿಕರ ನಿಲುವು. ಸಾಂಖ್ಯ ಮತ್ತು ಯೋಗದರ್ಶನಗಳಲ್ಲಿ ಅಪವರ್ಗವನ್ನೇ ಕೈವಲ್ಯವೆಂದು ವ್ಯವಹರಿಸಿದ್ದಾರೆ.
	
ನೈಯಾಯಿಕರ ದ್ವಾದಶಪ್ರಮೇಯಗಳಲ್ಲಿ ಅಪವರ್ಗ ಒಂದು; ದುಃಖವಾದ ಅನಂತರ ಬರುವ ಹನ್ನೆರಡನೆಯದು. ಮೊದಲನೆಯ ಆರನ್ನು ಕಾರಣವೆಂದೂ ಉಳಿದ ಆರನ್ನು ಕಾರ್ಯವೆಂದು ಪರಿಗಣಿಸುವ ಪದ್ಧತಿಯಿದೆ. ಪ್ರವೃತ್ತಿ, ದೋಷ, ಪ್ರೇತ್ಯಭಾವ (ಸಂಸಾರ) - ಇವು ಕಾರ್ಯಪ್ರಮೇಯಗಳು. ದುಃಖ ಮತ್ತು ಅಪವರ್ಗಗಳು ಫಲ. ಇಲ್ಲಿ ಆನಂದದಂತೆ ಅಪವರ್ಗ ಆತ್ಮದ ಸಹಜಸ್ಥಿತಿಯಲ್ಲ; ಪ್ರಯತ್ನಪೂರ್ವಕವಾಗಿ ಗಳಿಸಿಕೊಳ್ಳುವ ಸ್ಥಿತಿವಿಶೇಷ.				    
 
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ